ಪ್ರಶಂಸೆ ಮತ್ತು ದಂಡನೆ 

	ಶೈಕ್ಷಣಿಕವಾಗಿ ವಿಹಿತವೆನ್ನಬಹುದಾದ ವಿದ್ಯಾರ್ಥಿಯ ಯಾವುದಾದರೂ ಸಾಧನೆಗಾಗಿ ಅಧ್ಯಾಪಕರು ಅಥವಾ ಶಿಕ್ಷಣ ಸಂಸ್ಥೆ ಆ ಸಾಧನೆಯನ್ನು ಊರ್ಜಿತಪಡಿಸಿಕೊಳ್ಳಲೆಂಬ ಉದ್ದೇಶದಿಂದ ನೀಡುವ ಪ್ರೋತ್ಸಾಹ (ರಿವಾರ್ಡ್). ಇದು ಶ್ಲಾಘನೆ, ಶಿಫಾರಸ್ಸು ಗೌರವ ಸ್ಥಾನ ಪಾರಿತೋಷಕ ಅಥವಾ ಇನಾಮು ನೀಡಿಕೆ ಮುಂತಾದ ರೂಪಗಳಲ್ಲಿರಬಹುದು. ಹಿಂದುಳಿದ ವಿದ್ಯಾರ್ಥಿಗಳ ವಿಹಿತರೀತಿಯ ಸಾಧನೆಗೂ ಕಿರಿಯರ ಸಾಧನೆಗೂ ಬಹುಮಾನ ನೀಡಿಕೆ ವಾಸ್ತವಿಕ ರೀತಿಯದಾಗಿದ್ದು ಉತ್ತೇಜನಕಾರಿಯಾಗಿರುತ್ತವೆ. ಪ್ರತಿಭಾವಂತರಿಗೂ ಹಿರಿಯ ವಿದ್ಯಾವಂತರಿಗೂ ಹಿರಿಯ ವಿದ್ಯಾರ್ಥಿಗಳಿಗೂ ಇದು ಒಳ್ಳೆಯ ಮಾತು, ಸ್ಥಾನ, ಗೌರವ, ಶಿಫಾರಸ್ಸು, ಶಹಭಾಸುಗಳ ರೂಪದಲ್ಲಿರಬಹುದು. ಪ್ರಶಂಸೆಗೆ ವಿರುದ್ಧವಾದದ್ದು ದಂಡನೆ (ಪನಿಷ್‍ಮೆಂಟ್). ಪ್ರಶಂಸೆ ವಿಹಿತಸಾಧನೆಗಳನ್ನು ಊರ್ಜಿತಗೊಳಿಸಿಕೊಳ್ಳಲು ನೆರವಾದರೆ ದಂಡನೆ ಅಹಿತವರ್ತನೆಗಳನ್ನು ಕಡಿಮೆಮಾಡಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಇವೆರಡಕ್ಕೂ ಶಿಕ್ಷಣದಲ್ಲಿ ಸ್ಥಾನವುಂಟು.

	ಪ್ರಶಂಸೆ ಮತ್ತು ದಂಡನೆ ಶಿಕ್ಷಣಕಾರ್ಯದಲ್ಲಿ ಪರಿಣಾಮಕಾರಿಯಾದ ಸಾಧನಗಳಾದರೂ ಅವುಗಳ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ. ಕ್ಷಣಕ್ಷಣಕ್ಕೂ ಸಣ್ಣಪುಟ್ಟ ಸಾಧನೆಗಳಿಗೂ ಬಹುಮಾನ, ಪ್ರಶಂಸೆಗಳ ನೀಡಿಕೆ ಮೂಲ ಉದ್ದೇಶವನ್ನೇ ವ್ಯರ್ಥಗೊಳಿಸಬಹುದು. ಆಪಾತ್ರರಿಗೆ ನೀಡುವ ಪ್ರಶಂಸೆ ಬಹುಮಾನಗಳು ಪರಿಣಾಮರಹಿತವಾಗುವುದಲ್ಲದೆ ಅಪಹಾಸ್ಯಕ್ಕೂ ಗುರಿಯಾಗಬಹುದು. ದಂಡಂ ದಶಗುಣಂ ಭವೇತ್, ಸ್ಟೇರ್ ದಿ ರಾಡ್ ಅಂಡ್ ಸ್ಪಾಯಿಲ್ ದಿ ಚೈಲ್ಡ್ ಎಂಬ ನುಡಿಗಳು ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಮಹತ್ಪಾತ್ರವಹಿಸಿದ್ದರೂ ಈಗ ದಂಡನೆಯ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂಬುದು ಸ್ಪಷ್ಟಪಡುತ್ತಿದೆ. ಮುಯ್ಯಿ ತೀರಿಸಿಕೊಳ್ಳುವ ಉದ್ದೇಶದಿಂದಾಗಲಿ, ಶಿಸ್ತಿನ ಉದ್ದೇಶದಿಂದಾಗಲಿ ವ್ಯೆಯಕ್ತಿಕ ದ್ವೇಷದಿಂದಾಗಲಿ ನೀಡುವ ದಂಡನೆಯಿಂದ ವ್ಯಕ್ತಿಯ ವರ್ತನೆಯನ್ನು ತಿದ್ದಲು ಸಾಧ್ಯವಾಗದು. ಮಾಡಿದ ತಪ್ಪಿಗೆ ಅತಿಯಾದ ಶಿಕ್ಷೆಯೂ ವಿಹಿತವೆನಿಸದು. ದೇಹದಂಡನೆ ಸಾಮಾನ್ಯವಾಗಿ ಆಧುನಿಕ ಶಿಕ್ಷಣದಲ್ಲಿ ನಿಷಿದ್ಧವೆನಿಸಿದ್ದರೂ ಒಮ್ಮೊಮ್ಮೆ ಬಳಸಬೇಕಾಗಬಹುದು. ಆದರಿಂದ ವಿದ್ಯಾರ್ಥಿಗಳಿಗೆ ಶಾಶ್ವತವಾದ ದೈಹಿಕ ತೊಂದರೆಯಾಗಲಿ ಅತಿಯಾದ ಮಾನಸಿಕ ಯಾತನೆಯಾಗಲಿ ಆಗದಂತಿರಬೇಕು. ದುರ್ವರ್ತನೆಯನ್ನು ತೊರೆದು ವಿಹಿತಮಾರ್ಗಕ್ಕೆ ಪ್ರೋತ್ಸಾಹಿಸುವ ಸರಳರೀತಿಯ ಶಿಕ್ಷೆ ಮಾತುಗಳ ಮೂಲಕ ಎಚ್ಚರಿಸುವುದು, ಉತ್ತಮ ಸ್ಥಾನದಿಂದ ಕೆಳಗಿಳಿಸುವುದು. ಅಂಕ ಕಡಿಮೆ ಮಾಡುವುದು ಮುಂತಾದವುಗಳ ರೂಪದಲ್ಲಿರಬಹುದು. ಆದರೆ ಇದು ಅಧ್ಯಾಪಕರ ವ್ಯೆಯಕ್ತಿಕ ಕಾರಣಕ್ಕಾಗಿ ಪ್ರತೀಕಾರ ರೂಪದಲ್ಲಿರಕೂಡದು.

	ದುರ್ವರ್ತನೆ, ಪಾಠದಲ್ಲಿ ಹಿಂದಿರುವಿಕೆ, ಶಿಸ್ತುಭಂಗ ಮುಂತಾದುವಕ್ಕಾಗಿ ಕೊಠಡಿಯಲ್ಲಿ ಬಂಧಿಸುವುದು, ಮನೆಗೆಲಸ ಹೇರುವುದು ಅಷ್ಟಾಗಿ ಉಚಿತವೆನಿಸವು.
(ಬಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ